ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
"ಕನ್ನಡವೆಂದರೆ ಬರಿ ನುಡಿಯಲ್ಲ,
ಹಿರಿದಿದೆ ಅದರರ್ಥ.
ಜಲವೆಂದರೆ ಬರಿ ನೀರಲ್ಲ,
ಅದು ಪಾವನ ತೀರ್ಥ."
ಕನ್ನಡ'ವು ಜಗತ್ತಿನ ಅತ್ಯಂತ ಪುರಾತನ ಭಾಷೆ. ಇದಕ್ಕೆ ಸುಮಾರು 2500 ವರ್ಷಗಳ ಇತಿಹಾಸವಿದೆ. ಇದು ಭಾರತದ ಪ್ರಾಚೀನ ಭಾಷೆ ಸಂಸ್ಕೃತದ ಸಮಕಾಲೀನದ್ದು. ಪ್ರಪಂಚದಲ್ಲಿನ ಪ್ರಮುಖ 30 ಭಾಷೆಗಳಲ್ಲಿ "ಕನ್ನಡ"ವೂ ಒಂದು. ಸುಮಾರು 6 ಕೋಟಿ ಜನರು ಕನ್ನಡವನ್ನು ಮಾತನಾಡುತ್ತಾರೆ.
ಕನ್ನಡ ಬರವಣಿಗೆ ಮೂಲತಃ ಕದಂಬ ಲಿಪಿ'ಯಿಂದ ಬಂದದ್ದು ಎಂದು ಹೇಳಲಾಗುತ್ತಿದೆ. ಪೂರ್ವ ಹಳಗನ್ನಡವು ಕದಂಬ ಸಾಮ್ರಾಜ್ಯದಲ್ಲಿ ಬಳಸಲ್ಪಡುತ್ತಿತ್ತು. ಇದನ್ನು ನಾವು ಅಶೋಕನ ಶಿಲಾಶಾಸನಗಳಲ್ಲಿ ಬಳಸಿರುವುದನ್ನು ಕಾಣಬಹುದು. ಕನ್ನಡಲಿಪಿಯನ್ನು ಬಳಸಿರುವ "ಹಲ್ಮಿಡಿ" ಶಾಸನವು ಇದುವರೆಗೂ ದೊರೆತ ಶಿಲಾಶಾಸನಗಳಲ್ಲಿ ಅತ್ಯಂತ ಹಳೆಯದಾಗಿದೆ. ಒಂದು ಮೂಲದ ಪ್ರಕಾರ ಕನ್ನಡವು ಇನ್ನೊಂದು ದ್ರಾವಿಡ ಭಾಷೆ ತಮಿಳಿಗಿಂತಲೂ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ತಮಟುಕಲ್ಲು'ವಿನಲ್ಲಿ ಸಾಕ್ಷ್ಯಗಳು ದೊರಕಿವೆ. ಹೆಚ್ಚೂ-ಕಡಿಮೆ 30 ಸಾವಿರದಷ್ಟು ಕನ್ನಡ ಶಾಸನಗಳನ್ನು ಪತ್ತೆಹಚ್ಚಲಾಗಿದ್ದು ಅವುಗಳ ಆಳ ಅಧ್ಯಯನ ಮಾಡಲಾಗುತ್ತಿದೆ.
ಇನ್ನು 14 ನೆಯ ಶತಮಾನದಾರಂಭದಲ್ಲಿ ನಡುಗನ್ನಡವು ಬಳಕೆಗೆ ಬಂದಿತು. ಈ ಕಾಲದಲ್ಲಿ ಪ್ರಸಿದ್ಧ ಸಂತರೆನಿಸಿಕೊಂಡ ಕನಕದಾಸರು, ಪುರಂದರದಾಸರು, ನರಹರಿತೀರ್ಥರು, ವ್ಯಾಸತೀರ್ಥರು, ಶ್ರೀಪಾದರಾಯರು ವಾದಿರಾಜತೀರ್ಥರು, ವಿಜಯದಾಸರು ಮೊದಲಾದವರು ದಾಸ-ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿಯ ಚೇತನವನ್ನು ಬಿತ್ತಿದರು.
18ನೆಯ ಶತಮಾನದಿಂದೀಚೆಗೆ ಹೊಸಗನ್ನಡವು ಚಾಲ್ತಿಗೆ ಬಂದಿತು. ಗುಲ್ವಾಡಿ ವೆಂಕಟರಾಯರು ಆಧುನಿಕ ಕನ್ನಡದಲ್ಲಿ ಸಾಹಿತ್ಯಕೃಷಿ ಆರಂಭಿಸಿದ ಮೊದಲಿಗರು.
ಪಂಪ-ರಾಘವಾಂಕ-ಹರಿಹರ-ಜನ್ನ-ಪೊನ್ನ-ರನ್ನ-ಕುಮಾರವ್ಯಾಸರಿಂದ ಹಿಡಿದು ಬಸವಣ್ಣ-ಅಲ್ಲಮಪ್ರಭು-ದಾಸಿಮಯ್ಯ-ಅಕ್ಕಮಹಾದೇವಿ ಮುಂತಾದವರು ತಮ್ಮ ಸಾಹಿತ್ಯದ ಮೂಲಕ ಕನ್ನಡದ ಗರಿಮೆಯನ್ನು ಪಸರಿಸಿದ್ದಾರೆ.
ಆಧುನಿಕ ಕನ್ನಡದಲ್ಲಿ ಮುದ್ದಣ-ಕುವೆಂಪು-ಇಂದಿರಾ-ಬಿಎಂಶ್ರೀ-ರಾಜರತ್ನಂ-ಕೈಲಾಸಂ-ಪುತಿನ-ತೀನಂಶ್ರೀ-ದರಾಬೇಂದ್ರೆ-ಕಾರಂತರು-ಗೋಕಾಕರು-ಅನಂತಮೂರ್ತಿ-ಗಿರೀಶ್ ಕಾರ್ನಾಡ್-ಕಂಬಾರರು ಕನ್ನಡ ಸಾರಸ್ವತ ಲೋಕದ ದಿಗ್ಗಜರೆನಿಸಿಕೊಂಡಿದ್ದಾರೆ.
ಭಾರತದಲ್ಲಿ ಸಾಹಿತ್ಯ ಸಾಧನೆಗೆ ನೀಡುವ ಜ್ಞಾನಪೀಠ ಪುರಸ್ಕಾರವನ್ನು ಅತಿ ಹೆಚ್ಚು ಬಾರಿ (8) ಪಡೆದ ಭಾಷೆ ಕನ್ನಡವಾಗಿದೆ. ಪ್ರಸಿದ್ಧ ಭಾಷಾ ವಿದ್ವಾಂಸರ ಪ್ರಕಾರ ಜಗತ್ತಿನಲ್ಲಿಯೇ ಅತ್ಯಂತ ಸುಂದರ ಲಿಪಿ'ಯನ್ನು ಹೊಂದಿರುವ ಭಾಷೆ ಕನ್ನಡವಾಗಿದೆ. ಇದಕ್ಕೆ ಕಳಸವಿಟ್ಟಂತೆ ಘನ ಭಾರತ ಸರ್ಕಾರವು ಕನ್ನಡಕ್ಕೆ "ಶಾಸ್ತ್ರೀಯ"(ಅಭಿಜಾತ)ಭಾಷಾ ಗೌರವವನ್ನು ನೀಡಿದೆ.
ಇಂತಹ ನಾಡಿನಲ್ಲಿ ಜನ್ಮವೆತ್ತಿರುವ ನಾವೇ ಧನ್ಯರು.
ಕನ್ನಡ ನಮ್ಮ ಅಂತಃಕರಣದ ನುಡಿ.
ಕನ್ನಡ ನಮ್ಮ ಬದುಕು.
ಕನ್ನಡ ನಮ್ಮ ಉಸಿರು.
ಕನ್ನಡವೇ ಸತ್ಯ,
ಕನ್ನಡವೇ ನಿತ್ಯ,
ಅನ್ಯವೆಮಗೆ ಮಿಥ್ಯ.
ಜೈ ಭುವನೇಶ್ವರಿ!
ಜೈ ಕನ್ನಡಾಂಬೆ!
ಜೈ ಕರ್ನಾಟಕ!
ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು.

